WEL COME TO KANAKAGIRI UTSAV 2013

ಸೋಮವಾರ, ಫೆಬ್ರವರಿ 4, 2013

ವೈಭವದ ಕನಕಗಿರಿ ಉತ್ಸವಕ್ಕೆ ವರ್ಣರಂಜಿತ ತೆರೆ


ಕೊಪ್ಪಳ (ಕನಕಗಿರಿ ಕನಕರಾಯ ವೇದಿಕೆ) ಫೆ. ೦೩: ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಫೆಬ್ರವರಿ ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಜರುಗಿದ 'ಕನಕಗಿರಿ ಉತ್ಸವ' ಭಾನುವಾರ ವರ್ಣರಂಜಿತ ತೆರೆ ಕಂಡಿತು. ಕನಕಗಿರಿ ಸಂಸ್ಥಾನದ ಗತವೈಭವ ನೆನಪಿಸುವಂತೆ ನಿರ್ಮಾಣವಾಗಿದ್ದ ಕನಕರಾಯ ವೇದಿಕೆಯಲ್ಲಿ ಎರಡು ದಿನ ನಡೆದ ಉತ್ಸವದಲ್ಲಿ ಕನ್ನಡ ನಾಡು, ನುಡಿಯ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಜನಪದಕಲೆಗಳ ಶ್ರೀಮಂತಿಕೆ ಅನಾವರಣಗೊಂಡಿತು. ಗಂಗಾವತಿ ಬೀಚಿ ಪ್ರಾಣೇಶ ಅವರ ನಗೆ ಹಬ್ಬ ಜನರನ್ನು ನಗೆಗಡಲಲ್ಲಿ ತೇಲಿಸಿತು. ಬೆಂಗಳೂರಿನ ವೈಜಯಂತಿ ಕಾಶಿ ಅವರ ತಂಡ ಪ್ರಸ್ತುತಪಡಿಸಿದ 'ಹಂಪಿ ನಗರಿಯ ತೆಂಕಣ ದಿಕ್ಕಿನ' ಎಂಬ ವಿಶೇಷ ನೃತ್ಯ ರೂಪಕ ಅಲ್ಲದೆ ಭರತ ನಾಟ್ಯ, ಕೂಚುಪುಡಿ, ಒಡಿಸ್ಸಿ ನೃತ್ಯಗಳ ಮಿಳಿತವನ್ನೊಳಗೊಂಡ 'ಸಮ್ಮಿಲನ' ನೃತ್ಯ ನೋಡುಗರ ಮನ ಸೂರೆಗೊಂಡಿತು. ವಿಜಯನಗರ ಸಾಮ್ರಾಜ್ಯದ ಗತಕಾಲದ ಕನಕಗಿರಿ ಸಂಸ್ಥಾನದ ಇತಿಹಾಸ ನೆನಪಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಕನಕಗಿರಿ ಸಂಸ್ಥಾನದ ರಾಜಾ ಪರಸಪ್ಪ ನಾಯಕ, ರಾಜಾ ಉಡಚಪ್ಪ ನಾಯಕನ ಸಾಮ್ರಾಜ್ಯದಲ್ಲಿನ ವೈಭವ, ಕಲೆಗಳಿಗಿದ್ದ ಬೆಲೆ, ಭಕ್ತಿ-ಭಾವಗಳನ್ನು ತಮ್ಮ ರೂಪಕ ನೃತ್ಯದ ಮೂಲಕ ಜನರ ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿದರು. ಕನಕಗಿರಿಯ ಸರ್ಕಾರಿ ಕಾಲೇಜು ಆವರಣದಲ್ಲಿ ಎರಡು ದಿನ ಜರುಗಿದ ಕಬಡ್ಡಿ, ವಾಲಿಬಾಲ್, ಮಲ್ಲಕಂಬ, ಕುಸ್ತಿ ಸೇರಿದಂತೆ ನಾನಾ ಗ್ರಾಮೀಣ ಕ್ರೀಡೆಗಳು ನೋಡುಗರಲ್ಲಿ ಮೈ ನವಿರೇಳಿಸುವಲ್ಲಿ ಯಶಸ್ವಿಗೊಂಡವು. ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ತಂಡದ 'ಸಿನಿಮಾ ಲಾಹಿರಿ' ಸಂಗೀತ ಮೋಡಿಗೆ ಜನರು ಕುಣಿದು ಕೇಕೆ ಹಾಕಿದರು. ಖ್ಯಾತ ಗಾಯಕ ಹೇಮಂತ್, ಲತಾ ಹಂಸಲೇಖಾ ಮುಂತಾದ ಗಾಯಕರ ಗಾಯನದ ಮೋಡಿಗೆ ಚಪ್ಪಾಳೆಗಳ ಸುರಿಮಳೆ ಲಭಿಸಿತು. ಹಂಸಲೇಖ ತಂಡದ ಕಲಾವಿದರು ಪ್ರಸ್ತುತಪಡಿಸಿದ ನೃತ್ಯಕ್ಕೆ ಯುವಕರು ಹೆಜ್ಜೆ ಹಾಕಿ ಕುಣಿದರು. ಹಂಸಲೇಖರ ಹಲವು ಯುಗಳ ಗೀತೆಗಳು ಪ್ರೇಕ್ಷಕರ ಮನ ತಂಪಾಗಿಸಿದವು. ಹಂಸಲೇಖರ ಗೀತೆಗೆ ನೆರೆದ ಜನರು ಮಂತ್ರ ಮಗ್ದರಾಗಿ ತಲೆದೂಗಿದರು. ಎರಡು ದಿನಗಳ ಕಾಲ ನಡೆದ ಉತ್ಸವ ವಿಜಯನಗರ ಸಾಮ್ರಾಜ್ಯದ ಕೊಂಡಿಯಾದ ಕನಕಗಿರಿಯ ಗತ ವೈಭವವನ್ನು ಮರುಕಳಿಸುವ ಮೂಲಕ ಜನೋತ್ಸವವಾಗಿಸುವಲ್ಲಿ ಯಶಸ್ವಿಯಾಯಿತು. ಕನಕರಾಯ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಶಿವರಾಜ ತಂಗಡಗಿ ಮಾತನಾಡಿ ಈ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಬರದ ಹಿನ್ನೆಲೆಯಲ್ಲಿ ಎರಡು ವರ್ಷ ಉತ್ಸವ ನಡೆದಿರಲಿಲ್ಲ. ಉತ್ಸವ ಆಚರಣೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಉತ್ಸವದಲ್ಲಿ ನಡೆದ ಸಣ್ಣ-ಪುಟ್ಟ ತಪ್ಮ್ಪಗಳಿಗೆ ಕ್ಷೇತ್ರದ ಜನರ ಕ್ಷಮೆ ಯಾಚಿಸುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಮಾತನಾಡಿದರು. ಜಿಪಂ ಸದಸ್ಯ ಗಂಗಣ್ಣ ಸಮಗಂಡಿ, ಗ್ರಾಪಂ ಅಧ್ಯಕ್ಷೆ ರಂಗಮ್ಮ ನಾಯಕ, ತಾಪಂ ಸದಸ್ಯರಾದ ಹೊನ್ನೂರಸಾಬ್ ಚಿನ್ನೂರ, ಸರ್ವಮಂಗಳ ಭೂಸನೂರಮಠ, ಗ್ರಾಪಂ ಉಪಾಧ್ಯಕ್ಷ ಪ್ರಕಾಶ ಆದಿಮನಿ, ಕನಕಗಿರಿ ಸಂಸ್ಥಾನದ ರಾಜವಂಶಸ್ಥರಾದ ಹುಲಿಹೈದರ್‌ದ ರಾಜಾ ನವೀನ್‌ಚಂದ್ರ ನಾಯಕ, ರಾಜಾ ವಿಜಯ ನಾಯಕ, ರಾಜಾ ಚಚ್ಚಪ್ಪ ನಾಯಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶನಿವಾರ, ಫೆಬ್ರವರಿ 2, 2013

ಉತ್ಸವದ ಉದ್ಘಾಟನೆ


ಕನಕಗಿರಿ ಉತ್ಸವದ ಮತ್ತಷ್ಟು ಚಿತ್ರಗಳು


ಕನಕಗಿರಿ ಉತ್ಸವ : ಮಹಿಳೆಯರ ಕಬಡ್ಡಿಯಲ್ಲಿ ಬೆಂಗಳೂರು ಪ್ರಥಮ


ಐತಿಹಾಸಿಕ ಕನಕಗಿರಿ ಉತ್ಸವದ ಅಂಗವಾಗಿ ಕನಕಗಿರಿಯ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ಅಮೃತಹಳ್ಳಿ ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ. ಅತ್ಯಂತ ಕುತೂಹಲದಿಂದ ಕೂಡಿದ್ದ ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ಬೆಂಗಳೂರಿನ ಅಮೃತಹಳ್ಳಿ ತಂಡ ಕೇಸರಹಟ್ಟಿಯ ತಂಡದ ವಿರುದ್ಧ ಮೇಲುಗೈ ಸಾಧಿಸಿ, ಪ್ರಥಮ ಸ್ಥಾನ ಪಡೆದುಕೊಂಡಿತು. ಕೇಸರಹಟ್ಟಿಯ ಮಹಿಳಾ ಕಬಡ್ಡಿ ತಂಡ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆರಂಭದಿಂದಲೂ ಕುತೂಹಲ ಕಾಯ್ದುಕೊಂಡ ಈ ಪಂದ್ಯ ಅತ್ಯಂತ ರೋಚಕದಿಂದ ಕೂಡಿತ್ತು. ಕನಕಗಿರಿಯ ತಂಡ ಮೂರನೆ ಸ್ಥಾನ ಪಡೆದರೆ, ಕೊಪ್ಪಳದ ಕ್ರೀಡಾ ವಸತಿ ಶಾಲೆಯ ಮಹಿಳಾ ಕಬಡ್ಡಿ ತಂಡ ನಾಲ್ಕನೆ ಸ್ಥಾನ ಗಿಟ್ಟಿಸಿಕೊಂಡಿತು. ಪುರುಷರ ಕಬಡ್ಡಿ ಪಂದ್ಯಾಟಗಳು ಸಹ ನಡೆದಿದ್ದು, ಮೊದಲ ದಿನ ೮ ತಂಡಗಳುಕ್ವಾರ್ಟರ್ ಫೈನಲ್ ತಲುಪಿವೆ. ರಂಗೋಲಿ : ಕಾಲೇಜು ಕಟ್ಟಡದಲ್ಲಿ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆ ಅತ್ಯಂತ ಆಕರ್ಷಕವಾಗಿತ್ತು. ಅತೀವ ಉತ್ಸಾಹದಿಂದ ಪಾಲ್ಗೊಂಡಿದ್ದ ನೀರೆಯರು, ಆಕರ್ಷಕ ರಂಗೋಲಿ ಬಿಡಿಸಿ, ತಮ್ಮ ಪ್ರತಿಭೆಯನ್ನು ಮೆರೆದರು. ರಂಗೋಲಿಯ ಚಿತ್ತಾರ ನೋಡುಗರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಹುಲಿಗಿಯ ಉಮಾ ಮಹೇಶ್ವರಿ ತಮ್ಮ ಅತ್ಯಾಕರ್ಷಕ ರಂಗೋಲಿಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು. ಕಂಪ್ಲಿಯ ಮಂಜುಭಾರ್ಗವಿ ಎರಡನೆ ಸ್ಥಾನ ಪಡೆದರೆ, ಕನಕಗಿರಿಯ ಶಿಲ್ಪಾ ಕಂಬಳಿ- ಮೂರನೆ ಸ್ಥಾನ ಹಾಗೂ ಗಿರಿಜಾ ವಿರೂಪಾಕ್ಷಪ್ಪ ಅವರು ನಾಲ್ಕನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಮೈ ನವಿರೇಳಿಸಿದ ಕುಸ್ತಿ : ಕನಕಗಿರಿಯ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯವನ್ನು ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಅವರು ಉದ್ಘಾಟಿಸಿದರು. ಕುಸ್ತಿ ಪಂದ್ಯದಲ್ಲಿ ಭಾಗವಹಿಸಲು ಮಹಾರಾಷ್ಟ್ರದ ಮುಂಬೈ, ನಾಸಿಕ್, ಪೂನಾ, ರಾಜ್ಯದ ಶಿವಮೊಗ್ಗ, ದಾವಣಗೆರೆ ಮುಂತಾದ ಜಿಲ್ಲೆಗಳಿಂದ ಕುಸ್ತಿ ಪಟುಗಳು ಆಸಕ್ತಿಯಿಂದ ಆಗಮಿಸಿದ್ದರು. ಕುಸ್ತಿ ಪಂದ್ಯವನ್ನು ಕುಸ್ತಿ ಪಟುಗಳ ತೂಕಕ್ಕೆ ಅನುಗುಣವಾಗಿ ವಿವಿಧ ವಿಭಾಗಗಳನ್ನು ನಿಗದಿಪಡಿಸಲಾಗಿತ್ತು. ಜಗಜ್ಜಟ್ಟಿಗಳಂತೆ ಕಾದಾಡಿದ ಕುಸ್ತಿ ಪಟುಗಳು, ತಮ್ಮ ಪಟ್ಟುಗಳ ಮೂಲಕ ನೋಡುಗರಲ್ಲಿ ರೋಮಾಂಚನ ಉಂಟುಮಾಡಿದರು. ವಿವಿಧ ವಿಭಾಗಗಳ ಕುಸ್ತಿ ಪಟುಗಳು ಪಂದ್ಯದ ಉಪಾಂತ್ಯವನ್ನು ತಲುಪಿವೆ. ಮಹಿಳೆಯರ ವಾಲಿಬಾಲ್ ಸ್ಪರ್ಧೆಯಲ್ಲಿ ಮೈಸೂರಿನ ಕ್ರೀಡಾ ವಸತಿ ಶಾಲೆಯ ತಂಡ ಮತ್ತು ಮಹಾರಾಷ್ಟ್ರ ರಾಜ್ಯದ ಪೂನಾದ ಮಹಿಳಾ ತಂಡ. ಖಾನಾಪುರ ತಾಲೂಕಿನ ಮಂಗಿನಕೊಪ್ಪ ಮತ್ತು ಹುಬ್ಬಳ್ಳಿಯ ಮಹಿಳಾ ವಾಲಿಬಾಲ್ ತಂಡ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾದವು. ಆಕರ್ಷಕ ಮಲ್ಲಕಂಭ ಪ್ರದರ್ಶನ : ಮಲ್ಲಕಂಭ ಪ್ರದರ್ಶನಕ್ಕಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಬಸರಿಹಾಳ, ಕಳಸ, ಶಿಗ್ಲಿ, ಆಡಲಕಟ್ಟೆ, ದಾವಣಗೆರೆ ಮುಂತಾದೆಡೆಗಳಿಂದ ಮಹಿಳೆಯರ ೧೦ ತಂಡ ಮತ್ತು ಪುರುಷರ೧೦ ತಂಡಗಳು ಆಗಮಿಸಿ, ಆಕರ್ಷಕ ಮಲ್ಲಕಂಭ ಪ್ರದರ್ಶನ ನೀಡಿದರು.

ಕನಕಗಿರಿ ಉತ್ಸವ ಸಂಭ್ರಮದ ಮೆರವಣಿಗೆ


ಕನಕಗಿರಿ ಉತ್ಸವ ಫೋಟೋಗಳು


ಶುಕ್ರವಾರ, ಫೆಬ್ರವರಿ 1, 2013

ಕನಕಗಿರಿ ಉತ್ಸವ ಬ್ಲಾಗ್ ಲೋಕಾರ್ಪಣೆ


ಕನಕಗಿರಿ : ದಿ. ೨ ಮತ್ತು ೩ ರಂದು ನಡೆಯಲಿರುವ ಕನಕಗಿರಿಯ ಉತ್ಸವದ ಮಾಹಿತಿ ನೀಡುವ ಬ್ಲಾಗ್‌ನ ಹೊಸ ಆವೃತ್ತಿಯನ್ನು ಮಾಜಿ ಸಚಿವ ಹಾಗೂ ಕನಕಗಿರಿ ಶಾಸಕರಾದ ಶಿವರಾಜ್ ತಂಗಡಗಿ ಲೋಕಾರ್ಪಣೆ ಮಾಡಿದರು. ಕನಕಗಿರಿಯ ಉತ್ಸವದ ಎಲ್ಲ ಮಾಹಿತಿಯ ಜೊತೆಗೆ ಕನಕಗಿರಿಯ ಇತಿಹಾಸ ಹಾಗೂ ಅಪರೂಪದ ಫೋಟೋಗಳನ್ನು ಈ ಬ್ಲಾಗ್ ಒಳಗೊಂಡಿದೆ. ಜಿಲ್ಲೆಯ ಮಾಹಿತಿ ಹಾಗೂ ಸುದ್ದಿಯನ್ನು ದೇಶ ವಿದೇಶಗಳಿಗೆ ಹರಡುವ ಕೆಲಸದಲ್ಲಿ ನಿರತರಾಗಿರುವ ಕನ್ನಡನೆಟ್ ಡಾಟ್ ಕಾಂ ಬಳಗದ ಕೆಲಸವನ್ನು ಶ್ಲಾಘಿಸಿದ ಶಾಸಕ ಶಿವರಾಜ್ ತಂಗಡಗಿ ಉತ್ಸವದ ಬಗ್ಗೆ ಆಸಕ್ತರು ದೇಶ ವಿದೇಶಗಳಲ್ಲಿಯೇ ಕುಳಿತು ಮಾಹಿತಿ ಪಡೆಯಲು ಇದು ಅನುಕೂಲವಾಗಲಿದೆ ಎಂದರು. ಕನಕಗಿರಿಯ ಬ್ಲಾಗ್ ಅಡ್ರೆಸ್ kanakagiriutsav.blogspot.com ನಲ್ಲಿ ಸಕಲ ಮಾಹಿತಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಕನ್ನಡನೆಟ್ ಡಾಟ್ ಕಾಂ ಸಂಪಾದಕ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮ ಸಂಪರ್ಕಿಸಲು ಕೋರಲಾಗಿದೆ.